ಶೇಷಗಿರಿರಾವ್ ಚುರಮರಿ
	1827-82. ವೃತ್ತಿಯಲ್ಲಿ ಎಂಜಿನಿಯ ರಿಂಗ್ ಇಲಾಖೆಯಲ್ಲಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದವರು. ಸಂಸ್ಕøತದಿಂದ ಕನ್ನಡಕ್ಕೆ ಕೆಲವು ಗ್ರಂಥಗಳನ್ನು ಅನುವಾದಿಸಿದ್ದಾರೆ. ಇವರು 1829ರಲ್ಲಿ ಜನಿಸಿದರು ನಾಲ್ಕೈದು ತಲೆಮಾರುಗಳ ಹಿಂದೆಯೇ ಇವರ ಮನೆತನದವರು ಧಾರವಾಡಕ್ಕೆ ಬಂದು ನೆಲಸಿದರು. ಮೊದಲು ಇವರ ಮನೆತನ ರಾಮದುರ್ಗದಲ್ಲಿ ಇದ್ದಿತು. ಈ ಮನೆತನಕ್ಕೆ ಮುದಕವಿ ಎಂಬ ಅಡ್ಡಹೆಸರು ಇತ್ತಂತೆ. ಧಾರವಾಡಕ್ಕೆ ಬಂದ ಮೇಲೆ ಈ ಮನೆತನದ ಹಿರಿಯರು ಚುರಮರಿ(ಪುರಿ)ಯ ಅಂಗಡಿಯಲ್ಲಿ ಕೆಲಸಕ್ಕಿದ್ದರಂತೆ. ಆದುದರಿಂದ ಮೊದಲಿನ ಅಡ್ಡಹೆಸರು ಹೋಗಿ ಚುರಮರಿ ಎಂದಾಯಿತಂತೆ. 

	ಇವರ ತಂದೆಯವರಾದ ರಾಮಚಂದ್ರರಾಯರು ಆಗಿನ ಕಲಾದಗಿ (ಬಿಜಾಪುರ) ಜಿಲ್ಲೆಯಲ್ಲಿ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಆಗಿದ್ದರು. ಸಂಪ್ರದಾಯವಂತರಾಗಿದ್ದ ಅವರು ಸಂಸ್ಕøತ ಭಾಷೆಯಲ್ಲಿ ಪರಿಣತರಾಗಿ ದ್ದರು. ಮಗನಿಗೆ ಬಾಲ್ಯದಲ್ಲಿಯೇ ಸಂಸ್ಕøತವನ್ನು ಕಲಿಸಿದರು. ಇದ್ದ ಊರಿನಲ್ಲಿಯೇ ಶಾಲೆಯ ಶಿಕ್ಷಣವನ್ನು ಮುಗಿಸಿದ ಇವರು ಅನಂತರ ಪುಣೆಗೆ ಹೋಗಿ ಎಂಜಿನಿಯರಿಂಗ್ ಕಾಲೇಜು ಸೇರಿದರು. ಅಲ್ಲಿಯ ಶಿಕ್ಷಣ ಮುಗಿದೊಡನೆ ಮುಂಬಯಿ ಪ್ರಾಂತದ ಲೋಕೋಪಯೋಗಿ ಶಾಖೆಯಲ್ಲಿ ಕೆಲಸಕ್ಕೆ ಸೇರಿದರು.

	ಮೊದಲಿನಿಂದಲೂ ಸಂಸ್ಕøತ ಭಾಷೆಯ ಬಗ್ಗೆ ಇವರಿಗೆ ಬಹಳ ಅಭಿಮಾನವಿತ್ತು. ಆ ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದ್ದ ಕರ್ಣಾಟಕ ಸಂಗೀತವನ್ನು ಇವರು ಚೆನ್ನಾಗಿ ಅರಿತಿದ್ದರು. ಕನ್ನಡ ಭಾಷೆಯ ಅಂದಿನ ಹೀನಸ್ಥಿತಿಗಾಗಿ ಇವರು ತುಂಬ ಮರುಗುತ್ತಿದ್ದರು. ಡೆಪ್ಯೂಟಿ ಚೆನ್ನಬಸಪ್ಪನವರಿಂದ ಕನ್ನಡ ದೀಕ್ಷೆಯನ್ನು ಪಡೆದು ಕನ್ನಡ ಅಭಿವೃದ್ಧಿಗೆ ಶ್ರಮಿಸಿದರು. ಮುಂಬಯಿಯಲ್ಲಿ ಇದ್ದಾಗಲೇ ಇವರು ಸಂಸ್ಕøತದ ಶಾಕುಂತಲ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದರು. ಇದರ ಮೊದಲನೆಯ ಆವೃತ್ತಿ ಮುಂಬಯಿಯ ಎಜುಕೇಷನ್ ಸೊಸೈಟಿ ಮುದ್ರಣಾಲಯದಲ್ಲಿ ಅಚ್ಚಾಗಿ ಪ್ರಕಟವಾಯಿತು(1870). ಅನಂತರ ಇದು ಹಲವು ಸಾರಿ ಮರುಮುದ್ರಣಗೊಂಡು ಜನಪ್ರಿಯವಾಯಿತು. ಸಂಸ್ಕøತದ ಮೃಚ್ಛಕಟಿಕ ನಾಟಕವನ್ನೂ ಇವರು ಕನ್ನಡಕ್ಕೆ ಅನುವಾದಿಸಿದ್ದರೆನ್ನಲಾಗಿದೆ. ಸುಂದರಾ ಎಂಬ ಸಾಮಾಜಿಕ ಏಕಾಂಕವೊಂದನ್ನು ಇವರು ರಚಿಸಿದ್ದರಂತೆ. 

	ಇವರು ಸಾಂಪ್ರದಾಯಿಕ ಆಚಾರವಿಚಾರಗಳಲ್ಲಿ ತುಂಬ ಶ್ರದ್ಧೆಯುಳ್ಳವ ರಾಗಿದ್ದರು. ಸಿಂಧ ಪ್ರಾಂತದಲ್ಲಿ ಕೆಲಸಮಾಡುತ್ತಿದ್ದಾಗ, ತಮಗೊದಗಿದ ಭೀಕರವಾದ ಕಾಯಿಲೆ ಮೂಲಕ, ಸಾಂಪ್ರದಾಯಿಕ ಆಚಾರಗಳನ್ನು ಅನಿವಾರ್ಯವಾಗಿ ಮೀರಿ ನಡೆಯಬೇಕಾಯಿತಂತೆ. ಮುಂದೆ ಇವರು ವರ್ಗವಾಗಿ ಧಾರವಾಡಕ್ಕೆ ಬಂದಮೇಲೆ ತಾವಾಗಿಯೆ ಬಹಿಷ್ಕøತರಂತೆ ಇರತೊಡಗಿದರಂತೆ. ಇವರಿಗೆ ರಸಾಯನವಿಜ್ಞಾನದಲ್ಲಿ ತುಂಬ ಆಸಕ್ತಿ ಇತ್ತು. ಒಂದು ರಾಸಾಯನಿಕ ಪ್ರಯೋಗದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಆದ ಆಕಸ್ಮಿಕದಿಂದ ಇವರು 1882ರಲ್ಲಿ ನಿಧನರಾದರು.  			
				(ಬಿ.ಕೆ.; ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ